ಕೆಳಗಿನವರಲ್ಲಿ ಯಾರು ಅಂತರ್-ರಾಜ್ಯ ಸಭೆಯ ಸದಸ್ಯರಾಗಿದ್ದಾರೆ?
(a) ಪ್ರಧಾನ ಮಂತ್ರಿಗಳು (b) ಮುಖ್ಯ ಮಂತ್ರಿಗಳು (c) ಆರು ಕ್ಯಾಬಿನೆಟ್ ಸಚಿವರು (d) ರಾಷ್ಟ್ರಪತಿ ಆಡಳಿತದಲ್ಲಿ ರಾಜ್ಯಗಳ ರಾಜ್ಯಪಾಲರು
ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ.
Ans: (a) a, b ಮತ್ತು c ಮಾತ್ರ
ರಾಷ್ಟ್ರಪತಿಯವರು ಸಂವಿಧಾನದ 263ನೇ ವಿಧಿಯನ್ವಯ ಅಂತರ್-ರಾಜ್ಯ ಮಂಡಳಿಯನ್ನು ಸ್ಥಾಪಿಸುವರು. ಪ್ರಧಾನ ಮಂತ್ರಿಯು ಅಂತರ್-ರಾಜ್ಯ ಮಂಡಳಿಯ ಅಧ್ಯಕ್ಷರಾಗಿದ್ದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುತ್ತಾರೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ವಿಧಾನಸಭೆ ಹೊಂದಿದ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ವಿಧಾನಸಭೆ ಹೊಂದಿರದ ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರು ಹಾಗೂ ಕೇಂದ್ರ ಗೃಹ ಸಚಿವರನ್ನೊಳಗೊಂಡ ಪ್ರಧಾನಮಂತ್ರಿ ನೇಮಕ ಮಾಡುವ ಆರು ಕ್ಯಾಬಿನೆಟ್ ಸಚಿವರು ಅಂತರ್-ರಾಜ್ಯ ಮಂಡಳಿಯ ಸದಸ್ಯರಾಗಿರುತ್ತಾರೆ.
2.
ಭಾರತ ಸಂವಿಧಾನದಲ್ಲಿನ ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ವಿಭಜನೆಯು ಯಾವುದರಲ್ಲಿ ಒದಗಿಸಲಾದ ಹಂಚಿಕೆ/ ಕಾರ್ಯಯೋಜನೆಯನ್ನು ಆಧರಿಸಿದೆ ?
Ans: (b) ಭಾರತ ಸರಕಾರದ ಅಧಿನಿಯಮ 1935
1935ರ ಭಾರತ ಸರಕಾರದ ಅಧಿನಿಯಮವು ಕೇಂದ್ರ ಹಾಗೂ ಪ್ರಾಂತ್ಯಗಳ ನಡುವೆ ಅಧಿಕಾರವನ್ನು ವಿಭಜಿಸಿತು. ಈ ಅಧಿನಿಯಮದನ್ವಯ ಕೇಂದ್ರ ಪಟ್ಟಿಯಲ್ಲಿ 49 ವಿಷಯಗಳು, ಪ್ರಾಂತೀಯ ಪಟ್ಟಿಯಲ್ಲಿ 54 ವಿಷಯಗಳು, ಸಮವರ್ತಿ ಪಟ್ಟಿಯಲ್ಲಿ 36 ವಿಷಯಗಳು ಹಾಗೂ ಉಳಿಕೆಯ ಎಲ್ಲ ಅಧಿಕಾರ ವಿಷಯಗಳನ್ನು ಗವರ್ನರ್ ಜನರಲ್ಗೆ ನೀಡಲಾಗಿತ್ತು. ಈ 1935ರ ಭಾರತ ಸರಕಾರದ ಅಧಿನಿಯಮವನ್ನೇ ಆಧರಿಸಿ ಸಂವಿಧಾನ ರಚನೆಯ ಸಂದರ್ಭದಲ್ಲಿ ಕೇಂದ್ರ- ರಾಜ್ಯಗಳ ಮಧ್ಯ ಅಧಿಕಾರವನ್ನು ಹಂಚಿಕೆ ಮಾಡಲಾಯಿತು.
3.
ಕೇಂದ್ರ ಶಾಸನಗಳ ಮತ್ತು ರಾಜ್ಯ ಶಾಸನಗಳ ನಡುವೆ ವಿವಾದ ಉದ್ಭವಿಸಿದಲ್ಲಿ ಕೇಂದ್ರ ಶಾಸನ ಸ್ಥಿರವಾಗುವುದು ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಭಾರತ ಸಂವಿಧಾನದ ಅನುಸೂಚಿಯಾವುದು?
Ans: (d) 254ನೇ ಅನುಚ್ಛೇಧ
ಸಂವಿಧಾನದ 254(2)ನೇ ಉಪವಿಧಿಯನ್ವಯ ಸಮವರ್ತಿ ಪಟ್ಟಿಯಲ್ಲಿರುವ 52 ವಿಷಯಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಶಾಸನ ರಚಿಸುವ ಅಧಿಕಾರ ಹೊಂದಿದ್ದು, ಸಮವರ್ತಿ ಪಟ್ಟಿಯ ವಿಷಯದ ಮೇಲೆ ಕೇಂದ್ರ ರಚಿಸಿದ ಕಾನೂನಿಗೂ ರಾಜ್ಯಗಳು ರಚಿಸಿದ ಕಾನೂನಿಗೂ ವಿರುದ್ಧ ಉಂಟಾದರೆ ರಾಜ್ಯ ಸರ್ಕಾರ ರಚಿಸಿದ ಕಾನೂನು ರದ್ದುಗೊಂಡು ಕೇಂದ್ರ ರಚಿಸಿದ ಕಾನೂನು ಜಾರಿಯಲ್ಲಿ ಬರುತ್ತದೆ.
4.
ಈ ಕೆಳಗಿನವುಗಳಲ್ಲಿ ಯಾರು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಲೆಕ್ಕ ಪತ್ರಗಳನ್ನು ಆಯಾ ರಾಜ್ಯಪಾಲರಿಗೋ/ಲೆಪ್ಟಿನೆಂಟ್ ರಾಜ್ಯಪಾಲರಿಗೋ ಒಪ್ಪಿಸುತ್ತಾರೆ?
Ans: (c) ಕಂಟ್ರೋಲರ್ & ಆಡಿಟರ್ ಜನರಲ್
ಸಂವಿಧಾನದ 151ನೇ ವಿಧಿಯನ್ವಯ ಮಹಾಲೆಕ್ಕ ಪರಿಶೋಧಕ ಹಾಗೂ ನಿಯಂತ್ರಕರು ಒಕ್ಕೂಟದ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ವರದಿಯನ್ನು ರಾಷ್ಟ್ರಪತಿಯವರಿಗೂ ಹಾಗೂ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ವರದಿಯನ್ನು ರಾಜ್ಯಪಾಲರಿಗೆ/ಲೆಫ್ಟಿನೆಂಟ್ ರಾಜ್ಯಪಾಲರಿಗೆ ಒಪ್ಪಿಸುವರು. ಈ C.A.G. ಯವರು ನೀಡಿದ ವರದಿಯನ್ನು ರಾಷ್ಟ್ರಪತಿಯವರು ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಹಾಗೂ ರಾಜ್ಯಪಾಲರು ವಿಧಾನ ಮಂಡಳದ ಮುಂದೆ ಇಡಲು ಕ್ರಮ ಕೈಗೊಳ್ಳುವರು.
5.
ಕೆಳಗಿನವುಗಳಲ್ಲಿ ಯಾವ ಅಧಿಕಾರವು ಕೇಂದ್ರ ಸರ್ಕಾರದ ಪಟ್ಟಿಯಲ್ಲಿಲ್ಲ?
Ans: (d) ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ
ಸಂವಿಧಾನದ 7ನೇ ಅನುಸೂಚಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಮಧ್ಯ ಅಧಿಕಾರಗಳ ಹಂಚಿಕೆ ಮಾಡಲಾಗಿದ್ದು, ಕೇಂದ್ರಕ್ಕೆ ಸಂಬಂಧಪಟ್ಟ 98 ವಿಷಯಗಳಲ್ಲಿ ವಿಶ್ವಸಂಸ್ಥೆ, ವಿಮೆ, ಜನಗಣತಿ ವಿಷಯಗಳು ಬರುತ್ತಿದ್ದು, ರಾಜ್ಯಕ್ಕೆ ಸಂಬಂಧಿಸಿದ 59 ವಿಷಯಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯದ ವಿಷಯ ಬರುತ್ತದೆ.
6.
ಭಾರತೀಯ ಸಂವಿಧಾನದಲ್ಲಿರುವ ಕೆಳಕಂಡ ಯಾವ ಅನುಚ್ಛೇದವು ಸಂಬಂಧಪಟ್ಟ ವಿಷಯ ವಸ್ತುವಿನ ಮಿತಿಗೊಳಪಡದೆ 'ಅಂತರಾಷ್ಟ್ರೀಯ ಕೌಲುಗಳು, ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಆಚರಣೆಗೆ ತರುವುದಕ್ಕಾಗಿ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿರುವುದನ್ನು ಪ್ರತಿಬಿಂಬಿಸುತ್ತದೆ?
Ans: (b) ಅನುಚ್ಛೇದ 253
ಸಂಬಧಪಟ್ಟ ವಿಷಯ ವಸ್ತುವಿನ ಮಿತಿಗೊಳಪಡದೆ ಸಂವಿಧಾನದ 253ನೇ ವಿಧಿಯನ್ವಯ, ಭಾರತ ಬೇರೆ ದೇಶಗಳೊಡನೆ ಮಾಡಿಕೊಂಡಿರುವ ಕೌಲು, ಒಪ್ಪಂದ ಅಥವಾ ಒಡಂಬಡಿಕೆಯನ್ನು ಅಥವಾ ಯಾವುದೇ ಅಂತರಾಷ್ಟ್ರೀಯ ಸಮ್ಮೇಳನ, ಸಂಘ ಅಥವಾ ನಿಕಾಯದಲ್ಲಿ ತೆಗೆದುಕೊಂಡ ಯಾವುದೇ ತೀರ್ಮಾನವನ್ನು ಕಾರ್ಯಗತಗೊಳಿಸುವುದಕ್ಕಾಗಿ ಸಮಗ್ರ ಭಾರತದ ರಾಜ್ಯಕ್ಷೇತ್ರಕ್ಕಾಗಿ ಅಥವಾ ಅದರ ಯಾವುದೇ ಭಾಗಕ್ಕಾಗಿ ಯಾವುದೇ ಕಾನೂನನ್ನು ಮಾಡಲು ಸಂಸತ್ತಿಗೆ ಅಧಿಕಾರವಿದೆ.
7.
ರಾಜ್ಯ ವಿಷಯ ಸೂಚಿಯಲ್ಲಿರುವ ವಿಷಯವೊಂದಕ್ಕೆ ಸಂಬಂಧಿಸಿದಂತೆ ಸಂಸತ್ತು ರಾಷ್ಟ್ರದ ಹಿತಕ್ಕಾಗಿ ಶಾಸನವನ್ನು ರೂಪಿಸಬೇಕಾಗಿದೆ. ಎಂದು ಘೋಷಿಸುವ ಅಧಿಕಾರ ಭಾರತದಲ್ಲಿ ಯಾರಿಗಿದೆ?
Ans: (d) ರಾಜ್ಯಸಭೆ (Council Of States)
ಸಂವಿಧಾನದ 249 ನೇ ವಿಧಿಯನ್ವಯ ರಾಜ್ಯಸಭೆ 2/3 ಬಹುಮತದಿಂದ ಒಂದು ಗೊತ್ತುವಳಿಯನ್ನು ಅಂಗೀಕರಿಸಿ, ರಾಷ್ಟ್ರೀಯ ಹಿತದೃಷ್ಟಿಯಿಂದ ರಾಜ್ಯಪಟ್ಟಿಯ ಯಾವುದೇ ವಿಷಯದ ಮೇಲೆ ಕಾನೂನು ರಚಿಸಬಹುದು.
8.
ಹೊಂದಾಣಿಕೆ ಇಲ್ಲದ ಜೊತೆಯನ್ನು ಗುರುತಿಸಿ.
Ans: (b) ಸ್ಟಾಕ್ ಎಕ್ಸ್ಚೇಂಜ್ : ಸಮವರ್ತಿಪಟ್ಟಿ
ರಾಷ್ಟ್ರೀಯ ಮಹತ್ವ ಪಡೆದ ಪ್ರಮುಖ ವಿಷಯಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತವೆ. ಷೇರು ವಿನಿಮಯ ವಿಷಯವು ಕೇಂದ್ರಪಟ್ಟಿಯಲ್ಲಿ ಬರುವ ವಿಷಯವಾಗಿದೆ.
9.
ಭಾರತ ಸಂವಿಧಾನದ 7ನೇ ಅನುಸೂಚಿಯ “ಕೇಂದ್ರಪಟ್ಟಿ” ಯಲ್ಲಿ ಬರುವ ಕೆಳಗಿನ ವಿಷಯ ಯಾವುದು?
Ans: (b) ಗಣಿ ಹಾಗೂ ತೈಲಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಸುರಕ್ಷತೆಯ ಬಗೆಗಿನ ನಿಯಮಾವಳಿಗಳು
ಕೃಷಿ, ಮೀನುಗಾರಿಕೆ ಹಾಗೂ ಸಾರ್ವಜನಿಕ ಆರೋಗ್ಯದ ವಿಷಯಗಳು ರಾಜ್ಯಗಳಿಗೆ ಸಂಬಂಧಿಸಿದ 'ರಾಜ್ಯಪಟ್ಟಿ'ಯಲ್ಲಿ ಬರುವ ವಿಷಯಗಳಾಗಿದ್ದು, ಗಣಿ ಹಾಗೂ ತೈಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಸುರಕ್ಷತೆಯ ಬಗೆಗಿನ ವಿಷಯ ಕೇಂದ್ರಪಟ್ಟಿಯಲ್ಲಿ ಬರುವ ವಿಷಯವಾಗಿದೆ.
10.
ಈ ಕೆಳಗಿನವುಗಳಲ್ಲಿ ಯಾವುದು ಭಾರತ ಸಂವಿಧಾನದ ಸಮವರ್ತಿಪಟ್ಟಿಯಲ್ಲಿದೆ?
Ans: (c) ಜನಸಂಖ್ಯೆ ನಿಯಂತ್ರಣ ಹಾಗೂ ಕುಟುಂಬ ಯೋಜನೆ
ಜನಸಂಖ್ಯಾ ನಿಯಂತ್ರಣ ಹಾಗೂ ಕುಟುಂಬ ಯೋಜನೆ ವಿಷಯವು 1976ರಲ್ಲಿ ಸಂವಿಧಾನಕ್ಕೆ ಮಾಡಲಾದ 42ನೇ ತಿದ್ದುಪಡಿಯನ್ವಯ ಸಮವರ್ತಿ ಪಟ್ಟಿಯ ವ್ಯಾಪ್ತಿಯಲ್ಲಿ ಬರುತ್ತದೆ. ಸಾರ್ವಜನಿಕ ಆರೋಗ್ಯ ಹಾಗೂ ನೈರ್ಮಲ್ಯ, ತಲೆಗಂದಾಯಗಳು ಹಾಗೂ ನಿಕ್ಷೇಪ ನಿಧಿ ವಿಷಯಗಳು ರಾಜ್ಯಪಟ್ಟಿಯ ವ್ಯಾಪ್ತಿಯಲ್ಲಿ ಬರುತ್ತವೆ.
11.
ಅಂತರ್-ರಾಜ್ಯ ಮಂಡಳಿಯು?
Ans: (d) ಸಂವಿಧಾನದ ಅವಕಾಶವೊಂದರ ಮೂಲಕ ಸ್ಥಾಪಿತವಾಯಿತು. (263ನೇ ಕಲಂ).
ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳ ವಿಚಾರಣೆ ಮಾಡುವ ಮತ್ತು ಸಲಹೆ ನೀಡುವ, ಕೇಂದ್ರ-ರಾಜ್ಯ, ರಾಜ್ಯ-ರಾಜ್ಯಗಳ ನಡುವಿನ ಸಾಮಾನ್ಯ ಹಿತಾಸಕ್ತಿಯನ್ನು ಹೊಂದಿರುವ ವಿಷಯಗಳ ಬಗ್ಗೆ ತನಿಖೆ ಮಾಡಿ ಚರ್ಚಿಸಲು ರಾಷ್ಟ್ರಪತಿಯವರು ಸಂವಿಧಾನದ 263ನೇ ವಿಧಿಯನ್ವಯ ಅಂತರ್-ರಾಜ್ಯ ಮಂಡಳಿಯನ್ನು ಸ್ಥಾಪಿಸುವರು. ಪ್ರಧಾನ ಮಂತ್ರಿಯವರು ಈ ಮಂಡಳಿಯ ಅಧ್ಯಕ್ಷರಾಗಿರುವರು ಹಾಗೂ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಅಂತರ್-ರಾಜ್ಯ ಮಂಡಳಿಯ ಸದಸ್ಯರಾಗಿರುವರು.